ನೀರುಕೋಶ -
	ಎಕಿನೋಕಾಕಸ್ ಗ್ರ್ಯಾಮ್ಯಲೋಸಸ್ ಎಂಬ ಪರಾವಲಂಬಿಯಾದ ಲಾಡಿಹುಳುವಿನ ಅಪಕ್ವ ಮರಿಗಳಿರುವ ಕೋಶ (ಹೈಡಟಿಡ್). ಈ ಹುಳು ಸಾಧಾರಣವಾಗಿ ಪ್ರಪಂಚದಲ್ಲಿ ಸರ್ವವ್ಯಾಪಿ ಆದರೆ, ಭಾರತದಲ್ಲಿ ಪಂಜಾಬ್ ಪ್ರದೇಶ ಮತ್ತು ಮದುರೈಯಂಥ ಕೆಲವು ನಗರಗಳನ್ನು ಬಿಟ್ಟರೆ ಇದು ಅಪರೂಪ. ಹುಳುವಿನ ಜೀವನಚಕ್ರ ಪೂರೈಸಲು ಎರಡು ಅತಿಥೇಯ ಪ್ರಾಣಿ ವರ್ಗಗಳು ಅವಶ್ಯಕ. ವಯಸ್ಕ ಹುಳುನಾಯಿ, ನರಿ, ತೋಳ, ಮುಂತಾದ ಆ ಜಾತಿಯ ಪ್ರಾಣಿಗಳ ಕರುಳಿನಲ್ಲಿ ಕಾಣದೊರೆಯುತ್ತದೆ. ಇದರ ಉದ್ದ ಮೂರರಿಂದ 6 ಮಿ.ಮಿ. ತಲೆಯೂ ಸೇರಿದಂತೆ ಇದರ ಶರೀರದಲ್ಲಿ ನಾಲ್ಕು ಶೋಷಕಗಳಿವೆ. ತಲೆ ಗುಂಡಗಿದ್ದು ಅದರ ತುದಿಯಲ್ಲಿ ಹೊರಚಾಚಬಹುದಾದ ಕಿರಮೂತಿಯಿದೆ. ಇಲ್ಲಿ ಎರಡು ಸಾಲು ಕಿರಿ ಕೊಕ್ಕೆಗಳಿವೆ. ವಯಸ್ಕ ಹುಳುವಿನ ಜೀವಿತಾವಧಿ 5-6 ತಿಂಗಳು. ಈ ಕಾಲದಲ್ಲಿ ಹುಳಿವಿನ ಸಾವಿರಾರು ಮೊಟ್ಟೆಗಳು ಅತಿಥೇಯ ಪ್ರಾಣಿಗಳ ಮಲದ ಮೂಲಕ ವಿಸರ್ಜಿತವಾಗುತ್ತದೆ. ಮೊಟ್ಟೆಗಳೂ, ಭ್ರೂಣಗಳೂ ಸುಮಾರು 0.05 ಮಿ.ಮೀ.ಯಷ್ಟು ಸೂಕ್ಷ್ಮದೇಹಿಗಳು. ಇಂತಹ ಮಲದಿಂದ ಕಲ್ಮಶಗೊಂಡ ಹುಲ್ಲನ್ನು ದನ-ಕುರಿ ಮುಂತಾದವು ತಿಂದಾಗ ಮೊಟ್ಟೆಗಳು ಅವುಗಳ ಕರುಳಿನಲ್ಲಿ ಒಡೆದು ಭ್ರೂಣಗಳು ಹೊರಬರುತ್ತವೆ. ಹೊರಬಂದ ಭ್ರೂಣಗಳು, ಈ ಅತಿಥೇಯಗಳ ಕರುಳು ಭಿತ್ತಿಯನ್ನು ಕೊರೆದು ಧಮನಿಗಳ ಮೂಲಕ ಯಕೃತ್ತನ್ನು ಸೇರಿ 70% ಭ್ರೂಣಗಳು ಅಲ್ಲಿ ನೆಲಸುತ್ತವೆ. ಮಿಕ್ಕವು ರಕ್ತದ ಮೂಲಕ ಪುಪ್ಪುಸಗಳನ್ನು ಸೇರಿ ಹತ್ತರಿಂದ 12% ಅಲ್ಲಿ ನೆಲಸುತ್ತವೆ. ಇನ್ನು ಉಳಿದವು ಪುನಃ ಗುಂಡಿಗೆಯಲ್ಲಿ ಹಾಯ್ದು ಮಿದುಳು ಮೊದಲುಗೊಂಡು ದೇಹದ ಎಲ್ಲೆಡೆಗಾದರೂ ಸಾಗಿ ಅಲ್ಲಿ ನೆಲಸುತ್ತದೆ. ಅಲ್ಲೆಲ್ಲ ಇವು ಬೆಳೆದು ನೀರಕೋಶಗಳಾಗುತ್ತವೆ. ನೀರುಕೋಶದೊಳಕ್ಕೆ ಅದರ ಭಿತ್ತಿಯಿಂದ ಅನೇಕ ಸಂಚಿಗಳು ಹುಟ್ಟಿಕೊಳ್ಳುತ್ತಾ ಅದರ ಗಾತ್ರ 3-4 ಸೆಂ.ಮೀ.ನಷ್ಟು ಕೂಡ ವೃದ್ದಿಯಾಗಬಹುದು. ಸಂಚಿಗಳೊಳಗೆ ವಯಸ್ಕ ಹುಳುವಿನ ತಲೆಯಂತಿರುವ ಹಲವಾರು ಅಪಕ್ವ ಮರಿಗಳು ಇರುತ್ತವೆ. ಈ ಎರಡನೇಯ ಅತಿಥೇಯ ಪ್ರಾಣಿಗಳಲ್ಲಿ ನೀರುಕೋಶ ಹೀಗೆ ಬೆಳೆಯುತ್ತ ಹಲವಾರು ವರ್ಷಗಳಿರಬಹುದು.

	ಕಾಲಾಂತರದಲ್ಲಿ  ಇಂತಹ ನೀರುಕೋಶಗಳಿರುವ ಪ್ರಾಣಿಯನ್ನು ನಾಯಿ ಮುಂತಾದ ಮಾಂಸಾಹಾರಿ ಪ್ರಾಣಿಗಳು ತಿನ್ನುವ ಅವಕಾಶ ಒದಗಿದಾಗ ಅವುಗಳ ಕರುಳಿನಲ್ಲಿ ನೀರುಕೋಶ ಒಡೆದು ಅದರಲ್ಲಿರುವ ತಲೆಗಳು ಈ ಪ್ರಾಣಿಗಳ ಕರುಳಭಿತ್ತಿಗೆ ಚುಚ್ಚಿಕೊಂಡು ನೆಲೆಸಿ ಅಲ್ಲಿ ವಯಸ್ಕ ಹುಳುಗಳಾಗಿ ಬೆಳೆಯುತ್ತವೆ. ಸುಮಾರು  40 ದಿವಸಗಳಲ್ಲಿ ಬೆಳವಣಿಗೆ ಪೂರ್ತಿಯಾಗಿ ಅವು ಮೊಟ್ಟೆಗಳನ್ನು ತಯಾರಿಸಲು ಪ್ರಾರಂಭಿಸುತ್ತವೆ. ಇವು ಈ ಅತಿಥೇಯ ಪ್ರಾಣಿಗಳ ಮಲದ ಮೂಲಕ ವಿಸರ್ಜಿತವಾಗಿ ಪುನಃ ಹುಳುವಿನ ಜೀವನಚಕ್ರ ಮುಂದುವರಿಯುತ್ತವೆ. ಮೊಟ್ಟೆ ತಯಾರಿಸುವ ವಯಸ್ಕ ಹುಳುವ ಇರುವ ನಾಯಿ ಮುಂತಾದ ಮಾಂಸಾಹಾರಿ ಪ್ರಾಣಿಗಳು ನಿಶ್ಚಿತ ಅತಿಥೇಯಗಳು (ಡೆಫನೇಟಿವ್‍ಹೋಸ್ಸ್ಟ್). ವಯಸ್ಕ ಹುಳುವಿನ ತಲೆಯಂತಿರುವ ಭಾಗವನ್ನು ತಯಾರಿಸುವ ನೀರುಕೋಶ ಇರುವ ದನ, ಕುರಿ ಮುಂತಾದ ಸಸ್ಯಾಹಾರಿಗಳು ಮಧ್ಯಾಂತರ ಅತಿಥೇಯಗಳು. ಹುಳುವಿನ ಜೀವನಚಕ್ರದಲ್ಲಿ ಇದೇ ಸಾಮಾನ್ಯ ನಿಯಮ. ನಾಯಿಯ ಮಲದಲ್ಲಿ ವಿಸರ್ಜಿತವಾದ ಮೊಟ್ಟೆಗಳು ನಾಯಿಯ ನಿಕಟ ಸಂಪರ್ಕವುಳ್ಳ ಮಾನವ ವ್ಯಕ್ತಿಯ (ಸಾಮಾನ್ಯವಾಗಿ ಮಕ್ಕಳ) ಜೀರ್ಣನಾಳವನ್ನು ಹೋಗುವುದು ಅಪರೂಪವಲ್ಲ. ಸಣ್ಣ ವಯಸ್ಸಿನಲ್ಲಿ ಹೀಗೆ ಸೋಂಕುಂಟಾದರೂ ಸಾಮಾನ್ಯವಾಗಿ ನಡು ವಯಸ್ಸಾದ ಬಳಿಕವೇ ಸೋಂಕಿನ ಪರಿಣಾಮ ಕಂಡುಬರುವುದು ಸೋಜಿಗ. ಮೊಟ್ಟೆಗಳು ಮಾನವನಲ್ಲೂ ಕುರಿದನಗಳಲ್ಲಿಯಂತಯೇ ಪ್ರಧಾನವಾಗಿ ಯಕೃತ್ತು ಪುಪ್ಪುಸಗಳಲ್ಲಿ ನೆಲಸಿ ನೀರುಕೋಶಗಳಾಗಿ ವೃದ್ಧಿಸಿದರೂ ಮಿದುಳು ಮತ್ತು ಅಂಗಗಳಲ್ಲಿಯೂ ನೆಲಸಬಹುದು. ನೆಲೆಸಿದೆಡೆ ಅವುಗಳ ಗಾತ್ರ ವೃದ್ಧಿಗೊಳ್ಳುತ್ತಾ ಒತ್ತುವುದರಿಂದ ಆಯಾ ನೆಲೆಗೆ ಅನುಗುಣವಾದ ವ್ರತಿಕ್ರಿಯೆ ಪರಿಣಾಮಗಳು ಕಂಡುಬರಬಹುದು. ಅನೇಕ ವೇಳೆ ಇವು ಅನುಗಣವಾಗಿಯೇ ಇರುತ್ತವೆ.

	ನೀರುಕೋಶದೊಳಗೆ ಅನ್ವರ್ಥವಾಗಿ ದ್ರವವೂ ಇರುತ್ತದೆ. ಈ ದ್ರವ ಸ್ವಚ್ಚವಾಗಿಯೂ, ವರ್ಣರಹಿತವಾಗಿಯೂ ಇರಬಹುದು. ಇಲ್ಲವೇ ತೆಳು ಹಳದಿ ಬಣ್ಣದ್ದಾಗಿರಬಹುದು. ಇದರ ಸಾಪೇಕ್ಷ ಸಾಂದ್ರತೆ 1.004 ರಿಂದ 1.01ರ ವರೆಗೆ ಇರುತ್ತದೆ. ಅಲ್ಪ ಆಮ್ಲೀಯ ಗುಣವುಳ್ಳ (ಪಿಎಚ್ 6.7) ಹಾಗೂ ಸೋಡಿಯಂ ಮತ್ತು ಕ್ಯಾಲ್ಷಿಯಂ, ಪಾಸ್ಪೇಟ್, ಕ್ಲೋರೈಡ್, ಸಕ್ಸಿನೇಟ್ ಅಯಾನುಗಳುಳ್ಳ ಈ ದ್ರವದಲ್ಲಿ ಕಣ್ಣಿಗೆ ಕಾಣದ ನೂರಾರು ಅಪಕ್ವ ಕ್ರಿಮಿಗಳು ಕಳಚಿಕೊಂಡ ಕಿರುಕೊಕ್ಕೆಗಳೂ ಇರುತ್ತವೆ. ಕಾರಣಾಂತರದಿಂದ ನೀರುಗುಳ್ಳೆ ಒಡೆದು ಈ ದ್ರವ ಹೊರಬಂದರೆ, ಅದು ಲಸಿಕೆ, ಒಗ್ಗದಿಕೆಯಂಥ (ಅನಾಫೈಲಾಕ್ಸಿಸ್) ತೀವ್ರ ಪರಿಸ್ಥಿತಿಯನ್ನುಂಟು ಮಾಡಬಹುದು; ಅಲ್ಲದೇ ಆ ನೆರೆಯಲ್ಲೆಲ್ಲ ಸೋಂಕು ಹರಡಿಕೊಳ್ಳಬಹುದು.

	ಮಾನವ ನಾಯಿ ನರಿಗಳ ಆಹಾರವಾಗುವ ಪ್ರಮೇಯ ಬಹುಶಃ ಇಲ್ಲವೇ ಇಲ್ಲವಾದ್ದರಿಂದ ಮಾನವನಲ್ಲಿ ತಂಗಿದ ಲಾಡಿ ಹುಳುವಿನ ಜೀವನಚಕ್ರ ಮುಗಿದಂತೆಯೇ ಎಂಬುದನ್ನು ಮಾನವನಿಂದ ಮಾನವನಿಗೆ ಸೋಂಕು ಎಂದೂ ಹರಡಲಾರದೆಂದು ಗಮನಿಸಬೇಕು. ಅಂತಯೆ ಮಾನವನಲ್ಲಿ ವಯಸ್ಕ ಹುಳುವಿರುವುದು ಸಾಧ್ಯವೂ ಇಲ್ಲ. ಸೋಂಕುಪೀಡಿತನಾಗಿ ನೀರುಕೋಶಗಳನ್ನು ಪೋಷಿಸುತ್ತಿರುವ ಮಾನವನಿಗೆ ಮಾಡಬಹುದಾದ ಚಿಕಿತ್ಸೆ ಒಂದು ಶಸ್ತ್ರಕ್ರಿಯೆಯ ಮೂಲಕ ನೀರುಕೋಶವನ್ನು ಸಂಪೂರ್ಣವಾಗಿ ತೆಗೆದು ಹಾಕವುದು. ಇತರ ಅಂಗಗಳಿಗೆ ಅಥವಾ ಉದರಕುಹರದೊಳಗೆ ನೀರುಕೋಶದ ದ್ರವ ಹರಿಯದಂತೆ ಎಚ್ಚರಿಕೆ ವಹಿಸಿದಲ್ಲಿ ಚಿಕಿತ್ಸೆ ಸಾಮಾನ್ಯವಾಗಿ ಯಶಸ್ವಿಯಾಗುತ್ತದೆ. ಸರಿಯಾದ ಕ್ರಮಗಳಿಂದ ರೋಗ ತಾಗದಂತೆ ಎಚ್ಚರಿಕೆ ವಹಿಸುವುದು ಉಚಿತ-ರೋಗ ನಿರೋಧಕ ಕ್ರಮಗಳು ಇವು; 
ರೋಗಗ್ರಸ್ಥಪ್ರದೇಶಗಳಲ್ಲಿ ನಾಯಿಗಳಿಗೆ ಸೋಂಕು ಹತ್ತದಂತೆ (ಸೋಂಕುಳ್ಳ ಕುರಿ ದನಗಳ ಮಾಂಸವನ್ನು ತಿನ್ನದಂತೆ) ನೋಡಿಕೊಳ್ಳುವುದು.

ಹುಳು ನಾಶಕಗಳ ಮೂಲಕ ನಾಯಿಗಳಲ್ಲಿ ಹುಳು ನಿರ್ಮೂಲನ. 

ನಾಯಿಗಳೊಡನೆ ವ್ಯವಹರಿಸಿದ ತರುವಾಯ ಕೈಗಳನ್ನು ತೊಳೆದುಕೊಳ್ಳುವ ಮೂಲಕ ವೈಯಕ್ತಿಕವಾಗಿ ರೋಗ ಅಂಟದಂತೆ ನೋಡಿಕೊಳ್ಳುವುದು.

(ಎನ್.ಎಸ್.ಎಸ್.ಡಬ್ಲ್ಯೂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ